ನೀರಂಜಿ -
ಸ್ಯಾಲಿಕೇಸೀ ಕುಟುಂಬಕ್ಕೆ ಸೇರಿದ ಸಣ್ಣ ಗಾತ್ರದ, ತುಂಬ ಕವಲೊಡೆಯುವ ಮರ. ಸ್ಯಾಲಿಕ್ಸ್ ಟೆಟ್ರಸ್ಪರ್ಮ ಇದರ ಶಾಸ್ತ್ರೀಯ ಹೆಸರು. ಇದಕ್ಕೆ ಹೊಳೆ ಬೋಸಿ ಎಂಬ ಹೆಸರೂ ಇದೆ. ಹೊಳೆದಂಡೆ ಇಲ್ಲವೆ ಜೌಗು ಪ್ರದೇಶ ಇದರ ಸಹಜ ಆವಾಸ. ಶೀತ ಮತ್ತು ಸಮಶೀತೋಷ್ಣ ಪ್ರದೇಶಗಳ ಸಸ್ಯವಾದ ವಿಲೋ ಮರದ ಹತ್ತಿರ ಸಂಬಂಧಿ. ಇದರಿಂದಾಗಿ ಇದಕ್ಕೆ ದಕ್ಷಿಣ ಭಾರತದ ವಿಲೋ ಎಂಬ ಹೆಸರೂ ಉಂಟು. ಭಾರತದ ಉಷ್ಣ ಮತ್ತು ಉಪೋಷ್ಣ ಪ್ರದೇಶಗಳಲ್ಲೆಲ್ಲ ಇದರ ವ್ಯಾಪ್ತಿ ಉಂಟು.

	ನೀರಂಜಿ ಸುಮಾರು 10 ಮೀಟರ್ ಎತ್ತರಕ್ಕೆ ಬೆಳೆಯುವುದು. ಇದರ ಎಲೆಗಳೂ ಸರಳ. ಪರ್ಯಾಯ ರೀತಿಯಲ್ಲಿ ಜೋಡಣೆಗೊಂಡಿವೆ. ತೊಗಟೆ ಒರಟು, ಆಳವಾದ ಉದ್ದುದ್ದನೆಯ ಹಳ್ಳಗಳಿಂದ ಕೂಡಿದೆ. ಎಳೆಯ ಎಲೆ ಮತ್ತು ಟಿಸಿಲುಗಳ ಮೇಲೆ ಮೃದುವಾದ ರೇಷ್ಮೆಯಂಥ ಕೂದಲುಂಟು. ನೀರಂಜಿ ಏಕಲಿಂಗಿ; ಗಂಡು, ಹೆಣ್ಣು ಹೂಗಳಿರುವುದು ಬೇರೆ ಬೇರೆ ಮರಗಳಲ್ಲಿ. ಹೂಗೊಂಚಲು ತೂಗುಬಿದ್ದಿರುವ ಕ್ಯಾಟ್‍ಕಿನ್ ಮಾದರಿಯದು. ಹೂವಿನಲ್ಲಿ ಬರಿಯ ಕೇಸರಸಮೂಹ ಇಲ್ಲವೆ ಒಂಟಿ ಅಂಡಕೋಶ ಉಂಟು. ಪುಷ್ಪಪತ್ರಗಳಾಗಲೀ ದಳಗಳಾಗಲೀ ಇಲ್ಲ. ಇದರಿಂದಾಗಿ ದ್ವಿದಳವರ್ಗ ಸಸ್ಯಗಳಲ್ಲಿ ನೀರಂಜಿಯೇ (ಅದರ ಕುಟುಂಬವೇ) ಅತಿ ಪ್ರಾಚೀನ ಎಂದು ತಿಳಿಯಲಾಗಿದೆ. ಕೇಸರಗಳ ಸಂಖ್ಯೆ 4. ಅಂಡಾಶಯ 2 ಕಾರ್ಪೆಲುಗಳಿಂದ ಕೂಡಿದೆ. ಫಲ ಸಂಪುಟ ಮಾದರಿಯದು; ಒಣಗಿದಾಗ ಎರಡು ಭಾಗಗಳಾಗಿ ಒಡೆದು ಒಳಗಿನ ಸಣ್ಣ ಗಾತ್ರದ ಬೀಜಗಳನ್ನು ಹೊರಸೂಸುತ್ತದೆ. ಬೀಜಗಳ ಬುಡಭಾಗದಲ್ಲಿ ತುಪ್ಪುಳಿನಂಥ ಮೃದುವಾದ ಕೂದಲುಗಳಿವೆ.

	ನೀರಂಜಿಯ ಬೆಳೆವಣಿಗೆ ಶೀಘ್ರವಾದುದರಿಂದ ಇದು ಬೇಲಿ ಮತ್ತು ನೆರಳಿಗೆ ಉತ್ತಮವಾದ ಮರ. ಇದರ ಬೇರುಗಳು ನೆಲದೊಳಗೆ ಬಲವಾಗಿ, ಜಟಿಲವಾಗಿ ಹೆಣೆದುಕೊಳ್ಳುವುದರಿಂದ ನದೀ ದಂಡೆಯ ನೆಲ ಕುಸಿಯದಂತೆ ತಡೆಯಲು ಇದನ್ನು ಬೆಳೆಸುವುದುಂಟು. ನೀರಂಜಿಯ ಟೊಂಗೆಗಳಿಂದ ಬುಟ್ಟಿ, ಕುರ್ಚಿ, ಮಂಚಗಳನ್ನು ತಯಾರಿಸುವುದಿದೆ. ಅಲ್ಲದೆ ಸೀಸದ ಕಡ್ಡಿ ಮತ್ತು ಬೆಂಕಿಕಡ್ಡಿಯ ಮರಕ್ಕೆಂದು ನೀರಂಜಿಯ ಕಟ್ಟಿಗೆಯನ್ನು ಬಳಸುವುದುಂಟು.
(ಕೆ.ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ